ಅಭಿಪ್ರಾಯ / ಸಲಹೆಗಳು

ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ(ಸಾರಾ)

 

ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ (ಸಾರಾ):

            ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆಯು ಸ್ವದೇಶಿ ದತ್ತು ಪ್ರೋತ್ಸಾಹಿಸಲು ಮತ್ತು ವಿದೇಶಿ ದತ್ತು ಕಾರ್ಯಕ್ರಮವನ್ನು ಕ್ರಮಬದ್ಧಗೊಳಿಸಲು ಹಾಗೂ ಇತರೆ ಅಸಾಂಸ್ಥಿಕ ಕಾರ್ಯಕ್ರಮಗಳಾದ ಪ್ರಾಯೋಜಕತ್ವ, ಪೋಷಕತ್ವ ಮತ್ತು ಅನುಪಾಲನಾ ಕಾರ್ಯಕ್ರಮಗಳ ಅನುಷ್ಟಾನವನ್ನು ಸಮನ್ವಯ ಮತ್ತು ಮೇಲ್ವಿಚಾರಣೆ ಮಾಡುತ್ತದೆ.

 

ಕುಟುಂಬ ಆಧಾರಿತ ಅಸಾಂಸ್ಥಿಕ ಸೇವೆಗಳು ಪ್ರಾಯೋಜಕತ್ವ, ಫಾಸ್ಟರ್ ಕೇರ್, ಅನುಪಾಲನಾ ಸೇವೆಗಳು:-

           ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು: ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ಈ  ನಿಟ್ಟಿನಲ್ಲಿ ದತ್ತು ಪ್ರಕ್ರಿಯೆಯು ಅನಾಥ, ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳ ಪುನರ್ವಸತಿಗೆ ನೆರವಾಗುವ ಒಂದು ಸೂಕ್ತ ಕಾರ್ಯಕ್ರಮ. ಇಂತಹ ಮಕ್ಕಳಿಗೆ ಜೈವಿಕ ಪೋಷಕರನ್ನು ಒದಗಿಸಿಕೊಡುವುದರ ಮೂಲಕ ಶಾಶ್ವತ ಕುಟುಂಬದ ವ್ಯವಸ್ಥೆಯನ್ನು ಕಾನೂನು ಬದ್ಧವಾಗಿ ಕಲ್ಪಿಸಲು ದತ್ತು ಕಾರ್ಯಕ್ರಮ ನೆರವಾಗುತ್ತಿದೆ. 2017-18ನೇ ಸಾಲಿನಲ್ಲಿ ದೇಶದಲ್ಲಿ ದತ್ತು ನೀಡುವಲ್ಲಿ ಕರ್ನಾಟಕವು 2ನೇ ಸ್ಥಾನ ಪಡೆದಿರುತ್ತದೆ.2018-19ನೇ ಸಾಲಿನಲ್ಲಿ ಡಿಸೆಂಬರ್ 2018ರ ಅಂತ್ಯದವರೆಗೆ 229 ಮಕ್ಕಳನ್ನು ಸ್ವದೇಶಿ ದತ್ತು ಪೂರ್ವ ಪೋಷಕತ್ವಕ್ಕೆ ಹಾಗೂ 44 ಮಕ್ಕಳನ್ನು ವಿದೇಶಿ ದತ್ತು ನೀಡಲಾಗಿರುತ್ತದೆ.ಪ್ರಸಕ್ತ ಸಾಲಿನಲ್ಲಿ ಹೊಸದಾಗಿ 4 ವಿಶೇಷ ದತ್ತು ಸಂಸ್ಥೆಗಳನ್ನು ಚಿಕ್ಕಬಳ್ಳಾಪುರ, ಚಿತ್ರದುರ್ಗ, ಚಾಮರಾಜನಗರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾರಂಭಿಸಲಾಗಿದೆ.ಅನುಬಂಧ-5 ರಲ್ಲಿ ವಿಶೇಷ ದತ್ತು ಸಂಸ್ಥೆಗಳ ವಿಳಾಸವನ್ನು ಒದಗಿಸಲಾಗಿದೆ.

          ಒಂದು ಕಡೆ ಬೇಡವಾದ ಮಗು ಹುಟ್ಟುತ್ತಿದ್ದರೆ, ಇನ್ನೊಂದು ಕಡೆ ಮಗುವಿನ ನಿರೀಕ್ಷೆಯಲ್ಲಿ ಪರಿತಪಿಸುತ್ತಿರುವವರು ಅನೇಕರು. ಸರ್ಕಾರ ಗಮನಿಸಿದಂತೆ ಸಂಕಷ್ಟದಲ್ಲಿರುವ ಪೋಷಕರು ಮಗು ಬೇಡವೆಂದಾಗ ಕಸದ ತೊಟ್ಟಿಯಲ್ಲಿ, ರಸ್ತೆ ಬದಿಯಲ್ಲಿ, ಕಟ್ಟೆಯ ಬಳಿ, ಮುಳ್ಳಿನ ಬೇಲಿಯಲ್ಲಿ, ಪೊದೆಯಲ್ಲಿ, ಬಸ್ ಸೀಟ್ ಕೆಳಗೆ, ರೈಲಿನಲ್ಲಿ, ಆಸ್ಪತ್ರೆ ಚರಂಡಿ ಇತ್ಯಾದಿ ಕಡೆ ತ್ಯಜಿಸುವ ಮೂಲಕ ಮಕ್ಕಳು ಬೀದಿ ನಾಯಿಗಳಿಗೆ, ಇಲಿ ಹೆಗ್ಗಣಗಳಿಗೆ ಹಾಗೂ ಇನ್ನಿತರ ವಿಷಜಂತುಗಳಿಗೆ ಬಲಿಯಾಗುತ್ತಿದೆ. ಹೀಗೆ ಪೋಷಕರು ಪರಿತ್ಯಜಿಸುವ ಮಕ್ಕಳನ್ನು ಸುರಕ್ಷಿತ ಸ್ಥಳಗಳಲ್ಲಿ ಇಡಲು “ಮಮತೆಯ ತೊಟ್ಟಿಲು” ವ್ಯವಸ್ಥೆ ಮಾಡಲಾಗಿದೆ. ಇಂತಹ ತೊಟ್ಟಿಲುಗಳನ್ನು ರಾಜ್ಯದ ಎಲ್ಲಾ ಬಾಲಮಂದಿರಗಳು ಹಾಗೂ ವಿಶೇಷ ದತ್ತು ಕೇಂದ್ರಗಳಲ್ಲಿ ಇಡಲಾಗಿದೆ ಈ ವ್ಯವಸ್ಥೆಯ ಸದುಪಯೋಗ ಪಡೆಯುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮವಹಿಸಿದೆ.

          ಕಾನೂನು ಬಾಹಿರ ದತ್ತು ಪ್ರಕ್ರಿಯೆಯನ್ನು ತಡೆಗಟ್ಟಲು ಹಾಗೂ ಬೇಡವಾದ ಮಕ್ಕಳನ್ನು ಸ್ವೀಕರಿಸಲು ಅನುವಾಗುವಂತೆ ಮಮತೆಯ ತೊಟ್ಟಿಲು ಕುರಿತು ಸೊಸೈಟಿ ವತಿಯಿಂದ ಏಕರೂಪದ ಎರಡು ಪೋಸ್ಟ್ ಗಳನ್ನು ಸಿದ್ಧಪಡಿಸಿ ಎಲ್ಲಾ ಜಿಲ್ಲಾಮಕ್ಕಳ ರಕ್ಷಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಮಮತೆಯ ತೊಟ್ಟಿಲುಗಳನ್ನು ವಿಶೇಷ ದತ್ತು ಕೇಂದ್ರಗಳಲ್ಲಿ, ಬಾಲಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಇಡುವುದರೊಂದಿಗೆ ಇದರ ಉದ್ದೇಶವನ್ನು ಪೋಸ್ಟರ್ ಜೊತೆಗೆ ತೊಟ್ಟಿಲು ಇಟ್ಟಿರುವ ಕಡೆ ಹಾಕಲು ಹಾಗೂ ಆಸ್ಪತ್ರೆ ಸಿಬ್ಬಂದಿಯವರಿಗೆ ಈ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದೊಂದಿಗೆ ಮಾಹಿತಿ ನೀಡಲು ಎಲ್ಲಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ನ್ಯಾಯಾಲಯದಲ್ಲಿ ದತ್ತು ಆದೇಶ ಪಡೆಯಲು ದಾಖಲುಗೊಳ್ಳುವ ದತ್ತು ಪ್ರಕರಣಗಳನ್ನು ನಿಗಧಿತ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಅನುಕೂಲವಾಗುವಂತೆ ದತ್ತು ಪ್ರಕ್ರಿಯೆಯ  ಮಾಹಿತಿಯನ್ನೊಳಗೊಂಡಿರುವ  Bench Book for adoption ಎಂಬ ಪುಸ್ತಕವನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯಗಳಿಗೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೂಲಕ ನೀಡಲಾಗಿದೆ.ರಾಜ್ಯದಲ್ಲಿ 24 ಜಿಲ್ಲೆಗಳಲ್ಲಿ ವಿಶೇಷ ದತ್ತು ಸಂಸ್ಥೆಯು ಕಾರ್ಯ ನಿರ್ವಹಿಸಿದ್ದು ಉಳಿದ 06 ಜಿಲ್ಲೆಗಳಲ್ಲಿ ವಿಶೇಷ ದತ್ತು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿಲ್ಲ.

ಆ. ಪೋಷಕತ್ವ:-

          ಮಾರಣಾಂತಿಕ ಕಾಯಿಲೆ, ತೀವ್ರ ಅನಾರೋಗ್ಯ, ಸಾವು ಅಥವಾ ಇನ್ನಿತರೆ ಕಾರಣಗಳಿಂದ ಪೋಷಕರ ಆರೈಕೆಯಿಂದ ವಂಚಿತರಾದ ಮಕ್ಕಳನ್ನು ವಿಸ್ತೃತ ಕುಟುಂಬ ಸದಸ್ಯರು ಅಥವಾ ಅಸಂಬಂಧಿತ ವ್ಯಕ್ತಿ/ಕುಟುಂಬದಲ್ಲಿ ತಾತ್ಕಾಲಿಕ ಆರೈಕೆ ನೀಡುವ ಪರ್ಯಾಯ ವ್ವವಸ್ಥೆ, ಅಂತಿಮವಾಗಿ ಕುಟುಂಬದ ಸ್ಥಿತಿ ಸುಧಾರಿಸಿದಾಗ ಮಕ್ಕಳನ್ನು ಪುನರ್ವಸತಿ ಮಾಡುವುದು ಹಾಗೂ ಅತ್ಯಂತ ಕ್ಲಿಷ್ಠಕರವಾದ ಸಂದರ್ಭಗಳಲ್ಲಿ ಮಕ್ಕಳನ್ನು ಸಾಂಸ್ಥಿಕ ಸೇವೆಗೆ ಒಳಪಡಿಸಿವುದನ್ನು ತಪ್ಪಿಸುವುದು ಪೋಷಕತ್ವ ಕಾರ್ಯಕ್ರಮದ ಗುರಿ, ಪೋಷಕತ್ವ ಯೋಜನೆ ಮಾದರಿ ಮಾರ್ಗಸೂಚಿ 2016ವನ್ನು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಾಗಿದೆ. ನಿಯಮಾವಳಿಗಳನ್ನು ರಚಿಸುವ ಸಂಬಂಧ ದಿನಾಂಕ:26/09/2017ರಂದು ಅಧಿಸೂಚನೆ ಹೊರಡಿಸಲಾಗಿದೆ. ನಿಯಮಾವಳಿಗಳನ್ನು ರಚಿಸುವ ಸಂಬಂಧ ದಿನಾಂಕ:28/09/2018ರಂದು ಸಭೆಯನ್ನು ಏರ್ಪಡಿಸಲಾಗಿತ್ತು. ಮುಂದುವರೆದು ಎಲ್ಲಾ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ವಿಡಿಯೋ ಕಾನ್ಫೆರೆನ್ಸ್ ಮುಖಾಂತರ ಯೋಜನೆಯ ಕುರಿತು ತರಬೇತಿಯನ್ನು ಏರ್ಪಡಿಸುವ ಬಗ್ಗೆ ಕ್ರಮವಹಿಸಲಾಗುತ್ತಿದೆ. ದಿನಾಂಕ;13/02/2019ರಂದು ಪೋಷಕತ್ವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿಡಿಯೋ ಕಾನ್ಫರೆನ್ಸ್ ಅನ್ನು ಏರ್ಪಡಿಸಲಾಗಿತ್ತು.

ಇ. ಪ್ರಾಯೋಜಕತ್ವ ಕಾರ್ಯಕ್ರಮ:-

          ಪ್ರಾಯೋಜಕತ್ವ ಕಾರ್ಯಕ್ರಮವು ಮಕ್ಕಳನ್ನು ಸಂಸ್ಥೆಯ ವಾತಾವರಣದಿಂದ ಬೇರ್ಪಡಿಸಿ ಕುಟುಂಬದ ವಾತಾವರಣದಲ್ಲಿ ಬೆಳೆಸುವಂತೆ ಪ್ರೋತ್ಸಾಹಿಸುವ ಹಾಗೂ ವಿವಿಧ ಕಾರಣಗಳಿಂದ ಪೋಷಕರಿಂದ ಬೇರ್ಪಟ್ಟು ಶೋಷಣೆಗೆ ಒಳಗಾಗುವುದನ್ನು ತಪ್ಪಿಸಿ ಮಕ್ಕಳು ಕೌಟುಂಬಿಕ ವ್ಯವಸ್ಥೆಯಲ್ಲಿಯೇ ಬೆಳೆಯಲು ನೆರವಾಗುವಂತೆ ಆರ್ಥಿಕ ಸಹಾಯ ಒದಗಿಸುವ ಒಂದು ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವು 2006-07ನೇ ಸಾಲಿನಿಂದ ಅನುಷ್ಠಾನಗೊಳಿಸುತ್ತದೆ. ಈ ಕಾರ್ಯಕ್ರಮದಡಿ ಆಯ್ಕೆಯಾದ ಮಗುವಿಗೆ ಪ್ರತಿ ತಿಂಗಳಿಗೆ ರೂ.1,000/-ದಂತೆ ಆರ್ಥಿಕ ಸಹಾಯವು ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ನೀಡಲಾಗುತ್ತಿದ್ದು, ಈ ಆರ್ಥಿಕ ಸಹಾಯವನ್ನು ಮಕ್ಕಳ ಆರೋಗ್ಯ, ಚಿಕಿತ್ಸೆ, ಪೌಷ್ಠಿಕ ಆಹಾರ ಮತ್ತು ಶಿಕ್ಷಣಕ್ಕೆ ಬಳಸಿಕೊಳ್ಳುವುದರ ಮೂಲಕ ಮಕ್ಕಳು ಶಿಕ್ಷಣವನ್ನು ಮುಂದುವರೆಸಲು ನೆರವಾಗುವುದು. 2017-18ನೇ ಸಾಲಿಗೆ 4200 ಮಕ್ಕಳಿಗೆ ರೂ.300.00 ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ 2018-19ನೇ ಸಾಲಿಗೆ 3217 ಫಲಾನುಭವಿಗಳನ್ನು ಗುರುತಿಸಲಾಗಿದೆ.

ಈ. ಅನುಪಾಲನಾ ಸೇವೆಗಳು;

          ಬಾಲಮಂದಿರಗಳಿಂದ 18 ವರ್ಷ ಪೂರ್ಣಗೊಂಡ ಮಕ್ಕಳನ್ನು ಬಿಡುಗಡೆ ಮಾಡಬೇಕಾದ ಸಂದರ್ಭದಲ್ಲಿ ,ಮಕ್ಕಳ ಕಲ್ಯಾಣ ಸಮಿತಿಯು ಅಂತಹ ಮಕ್ಕಳಿಗೆ ಸಮಾಜದೊಡನೆ ಬೆರೆಯಲು ಇನ್ನೂ ಕಾಲಾವಕಾಶ ಅಗತ್ಯವೆಂದು ಅಭಿಪ್ರಾಯಪಟ್ಟಲ್ಲಿ ಅಥವಾ ಇನ್ಯಾವುದೇ ಪ್ರಮುಖ ಕಾರಣಗಳಿಂದ ಮಗುವಿಗೆ ಸಂಸ್ಥೆಯ ನೆರವು ಅಗತ್ಯವೆನಿಸಿದಲ್ಲಿ ಅಂತಹ ಮಕ್ಕಳಿಗೆ ಅನುಪಾಲನಾ ಸೇವೆಗಾಗಿ ಆದೇಶ ಮಾಡಿದಲ್ಲಿ ಗಂಡು ಮಕ್ಕಳನ್ನು ಪುರುಷ ಅನುಪಾಲನಾ ಗೃಹಗಳಿಗೆ ಹಾಗೂ ಹೆಣ್ಣು ಮಕ್ಕಳನ್ನುರಾಜ್ಯ ಮಹಿಳಾ ನಿಲಯಗಳಿಗೆ ದಾಖಲೆ ಮಾಡಲಾಗುವುದು. ಬೆಂಗಳೂರಿನಲ್ಲಿ ಬಾಲಕರ ಬಾಲಮಂದಿರಕ್ಕೆ ಹೊಂದಿಕೊಂಡಂತೆ ಒಂದು ಘಟಕ ಹಾಗೂ ಬುದ್ಧಿಮಾಂದ್ಯ ಮಕ್ಕಳ ಬಾಲಮಂದಿರಕ್ಕೆ ಹೊಂದಿಕೊಂಡಂತೆ ಇನ್ನೊಂದು ಅನುಪಾಲನಾ ಘಟಕವಿರುತ್ತದೆ. ಬೆಳಗಾವಿಯಲ್ಲಿ ಬಾಲಕರಿಗಾಗಿ ಒಂದು ಪ್ರತ್ಯೇಕ ಅನುಪಾಲನಾ ಗೃಹವಿದೆ. ರಾಜ್ಯದಲ್ಲಿ ಬೆಂಗಳೂರು (ನ), ಶಿವಮೊಗ್ಗ, ಮೈಸೂರು, ಗುಲ್ಬರ್ಗಾ, ಧಾರವಾಡ, ದಾವಣಗೆರೆ, ಉಡುಪಿ ಮತ್ತು ಬಳ್ಳಾರಿಯಲ್ಲಿ ರಾಜ್ಯ ಮಹಿಳಾ ನಿಲಯಗಳು ಕಾರ್ಯನಿರ್ವಹಿಸುತ್ತಿವೆ.ಸದರಿ ಸಂಸ್ಥೆಯ ನಿವಾಸಿಗಳು ಪ್ರೌಢಶಾಲೆ, ಐ.ಟಿ.ಐ, ಡಿಪ್ಲೋಮಾ, ಕಾಲೇಜು ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸುವುದರೊಂದಿಗೆ ಅವರಿಗೆ ಉದ್ಯೋಗವನ್ನು ದೊರಕಿಸಿಕೊಟ್ಟು ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನ ಮಾಡಲಾಗುತ್ತಿದೆ. 2018-19ನೇ ಸಾಲಿನ ಮಾರ್ಚ್ 2019ರ ಅಂತ್ಯಕ್ಕೆ ಒಟ್ಟು 62 ಗಂಡು ಮಕ್ಕಳು ಅನುಪಾಲನಾ ಗೃಹದ ಸೌಲಭ್ಯ ಪಡೆದಿರುತ್ತಾರೆ.

 

ಮಕ್ಕಳ ರಕ್ಷಣಾ ಯೋಜನೆಯಡಿಯಲ್ಲಿ ಮಕ್ಕಳ ರಕ್ಷಣೆ ಹಾಗೂ ಪುನರ್ವಸತಿಯ ಇತರೆ ಸೇವೆಗಳು :-

      ಮಕ್ಕಳ ಸಹಾಯವಾಣಿ ಸೇವೆ : 1098 : ಇದು ರಾಷ್ಟ್ರ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಮಕ್ಕಳ ಸಹಾಯವಾಣಿ, ಸಂಕಷ್ಟದಲ್ಲಿ ಸಿಲುಕಿರುವ /ರಕ್ಷಣೆ ಮತ್ತು ಪೋಷಣೆಗೆ ಅವಶ್ಯಕತೆ ಇರುವ ಮಕ್ಕಳಿಗೆ ತುರ್ತು ಸೇವೆಯನ್ನು ಒದಗಿಸಲು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ನೆರವು ಪಡೆಯಬಹುದಾಗಿದೆ, ಈ ಸಂಖ್ಯೆಯು ಉಚಿತ ದೂರವಾಣಿಯಾಗಿದ್ದು ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ಕರೆಮಾಡುವ ಮೂಲಕ ತುರ್ತು ನೆರವು ಅಗತ್ಯವಿರುವ, ಮಕ್ಕಳಿಗೆ ರಕ್ಷಣೆಯನ್ನು ಒದಗಿಸಬಹುದಾಗಿದೆ.ಭಾರತ ಸರ್ಕಾರವು 1999 ರಲ್ಲಿ ರಾಷ್ಟ್ರದ್ಯಂತ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ಸಹಾಯವಾಣಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್ (Child Line India Foundation) ನನ್ನು ಮಾತೃ ಸಂಸ್ಥೆಯಾಗಿ ಗುರುತಿಸಿರುತ್ತದೆ. ಮಕ್ಕಳಿಗೆ ತುರ್ತು ನೆರವನ್ನು ನೀಡುವುದರೊಂದಿಗೆ ತಾತ್ಕಾಲಿಕ ಪಾಲನೆ ಮತ್ತು ಪುನರ್ವಸತಿಯನ್ನು ಸಹ ಸಂಸ್ಥೆಯು ಒದಗಿಸಿರುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಉಡುಪಿ, ಕೋಲಾರ ಜಿಲ್ಲೆಗಳನ್ನುಹೊರತು ಪಡಿಸಿ ಉಳಿದ 28 ಜಿಲ್ಲೆಗಳಲ್ಲಿ ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್ ನ ಸಂಸ್ಥೆಯು ಮಕ್ಕಳ ಸಹಾಯವಾಣಿ ಸಂಸ್ಥೆಯನ್ನು 58 ಪಾಲುದಾರರ ನೆರವಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ, ಅನುಬಂಧ-6 ರಲ್ಲಿ ವಿವರ ನೀಡಲಾಗಿದೆ. ಕೋಲಾರ, ಉಡುಪಿ ಜಿಲ್ಲೆಯಲ್ಲಿ ಸಹಾಯವಾಣಿಯನ್ನು ಪ್ರಾರಂಭ ಮಾಡಲು ಕ್ರಮವಹಿಸಲಾಗಿದೆ. ರಾಜ್ಯಮಟ್ಟದ  ಚೈಲ್ಡ್ ಲೈನ್ ನ ಮಹಾಮಂಡಳಿಯು ಸರ್ಕಾರದ ಆದೇಶಸಂಖ್ಯೆ:ಮಮಇ 33 ಮಭಾಬ 2016. ಬೆಂಗಳೂರು, ದಿನಾಂಕ:21.04.2016ರಂದು ರಚನೆಗೊಂಡಿದ್ದು ಅದರಂತೆ ದಿನಾಂಕ:30.11.2018ರಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಇವರ ಅಧ್ಯಕ್ಷತೆಯಲ್ಲಿ 2 ನೇ ಸಭೆಯನ್ನು ನಡೆಸಲಾಗಿದೆ. ಜಿಲ್ಲಾಮಟ್ಟದ ಚೈಲ್ಡ್ ಲೈನ್ ನ ಮಹಾಮಂಡಳಿಯ ಸಭೆಯನ್ನು ನಡೆಸಲಾಗುತ್ತದೆ. ಉಳಿದ 14 ಜಿಲ್ಲೆಗಳಲ್ಲಿ ಸಭೆ ನಡೆಸಲು ಕ್ರಮವಹಿಸಲಾಗುತ್ತಿದೆ. 2018-19ನೇ ಸಾಲಿನ ಅಂಕಿ ಅಂಶಗಳ ಅನ್ವಯ ಮಕ್ಕಳ ಸಹಾಯವಾಣಿ ಮೂಲಕ ಒಟ್ಟು 6,91,418 ಕರೆಗಳನ್ನು ಸ್ವೀಕರಿಸಲಾಗಿದ್ದು, ಚೈಲ್ಡ್ ಲೈನ್ ಇಂಡಿಯಾ ಫೌಂಡೇಷನ್ ಸಂಸ್ಥೆ ಸ್ಪಂದಿಸಿದ್ದು ಸೌಲಭ್ಯ ಪಡೆದ ಮಕ್ಕಳ ವಿವರ ಕೆಳಕಂಡಂತಿವೆ.

                2017-18ರಲ್ಲಿ ಸ್ವೀಕರಿಸಿದ ಕರೆಗಳ ವಿವರ

ವೈದ್ಯಕೀಯ

2092

ಆಶ್ರಯಕೋರಿ

1840

ಪುನರ್ವಸತಿ

3292

ನಿಂದನೆ, ಕಿರುಕುಳ, ದೌರ್ಜನ್ಯದಿಂದ ರಕ್ಷಣೆ

12192

ಸಂಘರ್ಷಕ್ಕೊಳಗಾದ ಮಕ್ಕಳು

32

ಪ್ರಾಯೋಜಕತ್ವ

1109

ಪೋಷಕರು ಸಹಾಯಕ್ಕಾಗಿ ಮಾಡಿದ ಕರೆ

778

ಕಳೆದುಹೋದ ಮಗು ಸಿಕ್ಕಿರುವುದು

762

ಭಾವನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನ

3165

ಇತರೆ ಇಂಟರ್ ವೆನ್ ಷನ್ ಕರೆಗಳು

5327

ಮಾಹಿತಿ

20511

ಇತರೆ ಕರೆಗಳು

640318

ಒಟ್ಟು ಕರೆಗಳು

691418

ಕಾಣೆಯಾದ ಮಕ್ಕಳ ಬ್ಯೂರೊ (Missing Child Bureau):

            ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2000 ಹಾಗೂ ನಿಯಮ 2002 ಪ್ರಕಾರ ಕಾಣೆಯಾದ ಮಕ್ಕಳ ಬ್ಯೂರೊವನ್ನು ಪ್ರಾರಂಭಿಸಲಾಗಿದೆ. ಬಾಸ್ಕೊ ಸಂಸ್ಥೆಯನ್ನು ಬೆಂಗಳೂರು ನೋಡಲ್ ಸಂಸ್ಥೆಯಾಗಿ ನೇಮಿಸಲಾಗಿದೆ. ಕಾಣೆಯಾದ ಮಕ್ಕಳನ್ನು ತ್ವರಿತವಾಗಿ ಹುಡುಕಲು ಅನುಕೂಲವಾಗುವಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿರುತ್ತದೆ ಕಾಣೆಯಾದ ಮಕ್ಕಳ ಕುರಿತಾದ ಸಮಸ್ಯೆಗಳನ್ನು ಬಗೆಹರಿಸಲು, ಕಾಣೆಯಾದ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ನೆಟ್ವರ್ಕಿಂಗ್ ಸಮಸ್ಯೆಯನ್ನು ಬಗೆಹರಿಸುವುದು, ತ್ವರಿತ ಸಂವಹನ, ಮಾಹಿತಿ ಸಂಗ್ರಹಣೆ ಮತ್ತು ಹಂಚುವಿಕೆಗಾಗಿ ಯಂತ್ರ ರಚನೆಯನ್ನು ಅಭಿವೃದ್ಧಿಪಡಿಸುವುದು, ಕಾರ್ಯತಂತ್ರಗಳನ್ನು ರೂಪಿಸುವುದು ಕಾಣೆಯಾದ ಮಕ್ಕಳ ಬ್ಯೂರೊವಿನ ಉದ್ದೇಶವಾಗಿದೆ.

2018-19ನೇ ಸಾಲಿನಲ್ಲಿ ಕಾಣೆಯಾದ ಮಕ್ಕಳ ಪ್ರಕರಣಗಳ ವಿವರ (ಡಿಸೆಂಬರ್ ಅಂತ್ಯಕ್ಕೆ)

ಕಾಣೆಯಾದ ಮಕ್ಕಳ ಸಂಖ್ಯೆ

ಪತ್ತೆಯಾದವರ ಮಕ್ಕಳ ಸಂಖ್ಯೆ

ಪತ್ತೆಯಾಗದ ಮಕ್ಕಳ ಸಂಖ್ಯೆ

ಗಂಡು

ಹೆಣ್ಣು

ಗಂಡು

ಹೆಣ್ಣು

ಗಂಡು

ಹೆಣ್ಣು

532

588

314

361

218

227

1120

675

445

 

ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಮ್:

          ಸಮಗ್ರ ಮಕ್ಕಳ ರಕ್ಷಣಾ ಯೋಜನೆಯು ಕೇಂದ್ರ ಸರ್ಕಾರದ ಒಂದು ಮಹತ್ವಪೂರ್ಣವಾದ ಯೋಜನೆಯಾಗಿದ್ದು, ಈ ಯೋಜನೆಯ ಮುಖ್ಯ ಉದ್ದೇಶ ಸಂಕಷ್ಟದಲ್ಲಿರುವ ಮಕ್ಕಳ ಸಂರಕ್ಷಣೆ ಕುರಿತಾಗಿದ್ದು ಅದರಂತೆ ವಿವಿಧ ಸನ್ನಿವೇಶದಲ್ಲಿ ಮಕ್ಕಳ ಮೇಲಾಗುವ ದೌರ್ಜನ್ಯ ನಿರ್ಲಕ್ಷ್ಯ, ತ್ಯಜಿಸಲ್ಪಡುವಿಕೆಯನ್ನು ತಡೆಗಟ್ಟುವುದು. ಅಲ್ಲದೇ ಕಾಣೆಯಾದ ಮಕ್ಕಳ ಬಗ್ಗೆ ಯಾಂತ್ರಿಕವಾದ ಜಾಡನ್ನು ನಿರ್ಮಿಸುವುದು. ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಸಹಕಾರಿಯಾಗುವಂತೆ ಮಾಹಿತಿಗಳನ್ನು ಒಳಗೊಂಡ ತಂತ್ರಾಂಶವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ಮಾಹಿತಿ ಕೇಂದ್ರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ್ದು ಈ ತಂತ್ರಾಂಶದ ಮೂಲಕ ಮಕ್ಕಳು ಕಾಣೆ ಯಾಗಿರುವ ಬಗ್ಗೆ ಮಾಹಿತಿಗಳನಷ್ಟೇ ಅಲ್ಲದೇ ಕಾಣೆಯಾಗಿರುವ ಮಕ್ಕಳನ್ನು ಸಂರಕ್ಷಿಸಿರುವ ಬಗೆಗಿನ ನೈಜ ಮಾಹಿತಿಗಳನ್ನು ಪಡೆಯಬಹುದಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 20-07-2019 04:45 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಕ್ಕಳ ರಕ್ಷಣಾ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080