ಅಭಿಪ್ರಾಯ / ಸಲಹೆಗಳು

ರಾಜ್ಯ ಮಕ್ಕಳ ರಕ್ಷಣೆ

     ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿ

            ದಿನಾಂಕ:05.02.2011ರಂದು ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿಯು ನೋಂದಣಿಯಾಗಿದ್ದು, ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ ಮತ್ತು 30 ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ

     ರಾಜ್ಯ ಮಕ್ಕಳ ರಕ್ಷಣಾ ಸೊಸೈಟಿ ಕಾರ್ಯಕ್ರಮಗಳು ಕೆಳಕಂಡಂತಿವೆ.

 1. ಮಕ್ಕಳ ರಕ್ಷಣೆಗಾಗಿ ಇರುವ ಎಲ್ಲಾ ಕಾಯ್ದೆ ಹಾಗೂ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ, ಮಕ್ಕಳ ರಕ್ಷಣೆಗಾಗಿ ರಾಷ್ಟ್ರೀಯ ಕ್ರಿಯಾಯೋಜನೆಯಲ್ಲಿ ನಿಗಧಿಪಡಿಸಿರುವ ಗುರಿಯನ್ನು ಸಾಧಿಸಲು, ರಾಷ್ಟ್ರ ಮತ್ತು ರಾಜ್ಯದ ಆದ್ಯತೆಗಳು, ನಿಯಮ ಹಾಗೂ ಮಾರ್ಗಸೂಚಿಗಳನ್ನು ಸೊಸೈಟಿಯು ಅನು ಸರಿಸುತ್ತದೆ.
 2. ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಡಿ ಬರುವ ಎಲ್ಲಾ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆ, ಉಸ್ತುವಾರಿ ಹಾಗೂ ಸರ್ಕಾರದ ವತಿಯಿಂದ ನಡೆಯುತ್ತಿರುವ ಸಂಸ್ಥೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮೇಲ್ವಿಚಾರಣೆ.
 3. ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಗೆ ಅಗತ್ಯವಿರುವ ಆರ್ಥಿಕ ಸೌಲಭ್ಯವನ್ನು ಒದಗಿಸುವುದು ಹಾಗೂ ಹಣದ ಉಪಯುಕ್ತತೆಯ ಬಗ್ಗೆ ಪರಿಶೀಲಿಸುವ ಕಾರ್ಯವನ್ನು ನಿರ್ವಹಿಸುವುದು.
 4. ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯತೆಯನ್ನು ಮತ್ತು ನೆಟ್ ವರ್ಕಿಂಗ್ ಕಾರ್ಯವನ್ನು ಕೈಗೊಳ್ಳುವುದು.
 5. ಸಂಕಷ್ಟದಲ್ಲಿರುವ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಿ ದತ್ತಾಂಶವನ್ನು ದಾಖಲೀಕರಣ ಮಾಡಿ ದಿಕ್ಸೂಚಿಯನ್ನು ಅನುಸರಿಸಿ ಮೇಲ್ವಿಚಾರಣೆ ಮಾಡುವುದು.
 6. ಮಕ್ಕಳ ರಕ್ಷಣೆಗಾಗಿ ಶ್ರಮಿಸುತ್ತಿರುವ ವಿವಿಧ ಹಂತದ ಸಿಬ್ಬಂದಿ ಹಾಗೂ ಅಧಿಕಾರಿಗಳ (ಸರಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ) ಸಾಮರ್ಥ್ಯವನ್ನು ಬಲಪಡಿಸುವ ಸಲುವಾಗಿ ತರಬೇತಿಗಳನ್ನು ಹಾಗೂ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

     ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ (ಸಾರಾ)

       ರಾಜ್ಯ ದತ್ತು ಸಂಪನ್ಮೂಲ ಸಂಸ್ಥೆಯು ಸ್ವದೇಶಿ ದತ್ತು ಪ್ರೋತ್ಸಾಹಿಸಲು ಮತ್ತು ವಿದೇಶಿ ದತ್ತು ಕಾರ್ಯಕ್ರಮವನ್ನು ಕ್ರಮಬದ್ಧಗೊಳಿಸಲು ಹಾಗೂ ಇತರೆ ಅಸಾಂಸ್ಥಿಕ ಕಾರ್ಯಕ್ರಮಗಳಾದ ಪ್ರಾಯೋಜಕತ್ವ, ಪೋಷಕತ್ವ ಮತ್ತು ಅನುಪಾಲನಾ ಕಾರ್ಯಕ್ರಮಗಳ ಅನುಷ್ಟಾನವನ್ನು ಸಮನ್ವಯ ಮತ್ತು ಮೇಲ್ವಿಚಾರಣೆ ಮಾಡುತ್ತದೆ. ರಾಜ್ಯ ಮಕ್ಕಳ ರಕ್ಷಣಾ ಘಟಕ (ಯೂನಿಸೆಫ್ ಸಹಯೋಗದಲ್ಲಿ. ರಾಜ್ಯ ಮಕ್ಕಳ ರಕ್ಷಣಾ ಘಟಕವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಯೂನಿಸೆಫ್ ಹೈದರಾಬಾದ್ನ ಸಹಯೋಗದೊಂದಿಗೆ ರಾಜ್ಯದಲ್ಲಿ 2008-09ರಲ್ಲಿ ಅಸ್ಥಿತ್ವಕ್ಕೆ ಬಂದಿದೆ. ಮಕ್ಕಳ ರಕ್ಷಣೆಗೆ ಅಗತ್ಯವಾದ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಹಕರಿಸುವ ಉದ್ದೇಶ ಹೊಂದಿರುತ್ತದೆ. ರಕ್ಷಣಾ ಯೋಜನೆಯ ಅನುಷ್ಠಾನದಲ್ಲಿ ಬೆಂಬಲ ಘಟಕವಾಗಿ ಕಾರ್ಯ ನಿರ್ವಹಿಸುತ್ತದೆ

  ಜಿಲ್ಲಾ ಮಕ್ಕಳ ರಕ್ಷಣಾ ಘಟಕ:

         ಐಸಿಪಿಎಸ್ ಮಾರ್ಗಸೂಚಿಯನ್ವಯ ಪ್ರತಿ ಜಿಲ್ಲೆಯಲ್ಲಿ (30 ಜಿಲ್ಲೆಗಳಲ್ಲಿ) ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳನ್ನು ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಲ್ಲಿ ರಚಿಸಲಾಗಿದ್ದು ಅವುಗಳು ಕಾರ್ಯಾನುಷ್ಠಾನಗೊಳ್ಲುತ್ತಿವೆ. ಈ ಘಟಕಗಳು, ಮಕ್ಕಳ ಹಕ್ಕುಗಳು, ಮಕ್ಕಳ ರಕ್ಷಣಾ ಕಾಯ್ದೆಗಳು, ರಾಜ್ಯ ಮಕ್ಕಳ ಕ್ರಿಯಾಯೋಜನೆ ಹಾಗೂ ಮಕ್ಕಳಿಗೆ ಸಂಬಂಧಿಸಿದ ಇತರೆ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಕಾರ್ಯಾನುಷ್ಟಾನಗೊಳಿಸುತ್ತವೆ. 

   ಸೊಸೈಟಿಯು ಈ ಕೆಳಕಂಡ ಸಾಮಾಜಿಕ ಶಾಸನಗಳ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ.

   ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2015:

            ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2000 ವನ್ನು ಕೇಂದ್ರ ಸರ್ಕಾರವು ರಿಪೀಲ್ ಮಾಡಿ ಹೊಸ ಬಾಲನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆ 2015 ಅನ್ನು ಪ್ರಕಟಿಸಿರುತ್ತದೆ. ದಿನಾಂಕ:12.01.2016 ರಂದು ಭಾರತ ಸರ್ಕಾರವು ಹೊರಡಿಸಿದ ಅಧಿಸೂಚನೆಯ ಅನ್ವಯ ಸದರಿ ಕಾಯ್ದೆಯು ದಿನಾಂಕ:15.01.2016ರಿಂದ ಜಾರಿಗೆ ಬಂದಿರುತ್ತದೆ. ಭಾರತ ಸರ್ಕಾರವು ಬಾಲನ್ಯಾಯ ಕಾಯ್ದೆಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಮಾದರಿ ನಿಯಮಗಳು 2016ನ್ನು ದಿನಾಂಕ:21.09.2016 ರಂದು ಜಾರಿಗೆ ತಂದಿರುತ್ತದೆ. ಸರ್ಕಾರದ ಅಧಿಸೂಚನೆ ಸಂಖ್ಯೆ: ಮಮ ಇ 247 ಮಭಾಬ 2016, ದಿ:24.06.2017ರಲ್ಲಿ ರಾಜ್ಯ ಸರ್ಕಾರವು ಪ್ರತ್ಯೇಕ ನಿಯಮಗಳನ್ನು ರಚಿಸುವವರೆಗೆ ಕೇಂದ್ರ ಸರ್ಕಾರವು ರಚಿಸಿರುವ ಬಾಲನ್ಯಾಯ  (ಮಕ್ಕಳ ಪಾಲನೆ  ಹಾಗೂ ರಕ್ಷಣೆ) ಮಾದರಿ ನಿಯಮಗಳು 2016ರ ವ್ಯಾಪ್ತಿಯಲ್ಲಿಯೇ ಕಾರ್ಯ ನಿರ್ವಹಿಸಲು ತಿಳಿಸಿದ್ದು, ಪ್ರಸಕ್ತ ರಾಜ್ಯದಲ್ಲಿ ಅದರನ್ವಯ ಕಾರ್ಯ ನಿರ್ವಹಿಸಲಾಗುತ್ತಿದೆ.

  ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ 2012 ಮತ್ತು ನಿಯಮಗಳು: (POCSO Act)

         ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ಸಂರಕ್ಷಿಸುವ ಕಾಯ್ದೆ, 2012 ಕೇಂದ್ರ ಕಾಯ್ದೆಯಾಗಿದ್ದು, ಜೂನ್ 20, 2012 ರಂದು ಕೇಂದ್ರ ಗೆಜೆಟ್ ನಲ್ಲಿ ಪ್ರಕಟಗೊಂಡಿದ್ದು, ದಿನಾಂಕ:14.11.2012 ರಿಂದ ದೇಶಾದ್ಯಂತ ಈ ಕಾನೂನನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಯ್ದೆಯು ಮಕ್ಕಳನ್ನು ಲೈಂಗಿಕ ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಅಶ್ಲೀಲ ವಿಷಯಗಳ ಹಿಂಸೆಗಳಿಂದ ರಕ್ಷಿಸುತ್ತದೆ.

   

  ದತ್ತು ಅಧಿಸೂಚನೆ-2017: 16ನೇ ಜನವರಿ 2017 ರಂದು ಜಾರಿಗೆ ಬಂದಿದ್ದು, ದತ್ತು ಅಧಿಸೂಚನೆ-2017 ಅನ್ವಯ  ಇಲಾಖೆಯು ಮಕ್ಕಳನ್ನು ಕಾನೂನುಬದ್ಧವಾಗಿ ದತ್ತು ಸಂಸ್ಥೆಗಳ ಮೂಲಕ ದತ್ತು ನೀಡುತ್ತದೆ.      

   ಶಾಸನಬದ್ದ ಪೂರಕ ಸೇವೆಗಳು

  1. ಮಕ್ಕಳ ಕಲ್ಯಾಣ ಸಮಿತಿ:

              ಬಾಲನ್ಯಾಯ ಕಾಯ್ದೆಯ ಅನ್ವಯ ಮಕ್ಕಳ ಕಲ್ಯಾಣ ಸಮಿತಿಯು ಅಧ್ಯಕ್ಷರು ಮತ್ತು ನಾಲ್ಕು ಸದಸ್ಯರನ್ನು ಒಳಗೊಂಡಿದ್ದು, ನಾಲ್ಕು ಸದಸ್ಯರಲ್ಲಿ ಒಬ್ಬರು ಮಹಿಳೆ ಮತ್ತು ಒಬ್ಬರು ಮಕ್ಕಳ ವಿಷಯದಲ್ಲಿ  ಪರಿಣಿತರಾಗಿದ್ದು,  ಇವರುಗಳು ರಕ್ಷಣೆ ಮತ್ತು ಪೋಷಣೆಯ ಅಗತ್ಯವಿರುವ ಮಕ್ಕಳ ಬಗ್ಗೆ ಅಧಿಕಾರ ಚಲಾಯಿಸುವರು ಹಾಗೂ ಕರ್ತವ್ಯ ನಿರ್ವಹಿಸುವರು. ಇವರುಗಳು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಂತಹ ರಾಜ್ಯ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡವರಾಗಿರುತ್ತಾರೆ.

            ಸರ್ಕಾರದ ಅಧಿಸೂಚನೆ ಸಂಖ್ಯೆ-1, ಮಮಇ 202 ಮಭಾಬ 2017, ದಿ:26.09.2017 ಹಾಗೂ ಅಧಸೂಚನೆ ಸಂಖ್ಯೆ: ಮಮಇ 202 ಮಭಾಬ 2017, (ಭಾಗ-1) ದಿ:30.11.2017 ರನ್ವಯ ಎಲ್ಲಾ 30 ಜಿಲ್ಲೆಗಳಲ್ಲಿ ಒಟ್ಟು 33 ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಗಂಡು ಮಕ್ಕಳಿಗಾಗಿ ಮತ್ತು ಹೆಣ್ಣು ಮಕ್ಕಳಿಗಾಗಿ ಹಾಗೂ ಆರು ವರ್ಷದ ಒಳಗಿನ ಮಕ್ಕಳಿಗಾಗಿ ಪ್ರತ್ಯೇಕವಾಗಿ ಸೇರಿದಂತೆ ಒಟ್ಟು 3 ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ ಮತ್ತು ಶಿರಸಿಯಲ್ಲಿ  ಒಟ್ಟು 2 ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಲಾಗಿದೆ.

  ಕ್ರ ಸಂ

  1ನೇ ಏಪ್ರಿಲ್ 2019ರಂದು ಬಾಕಿ ಇರುವ ಪ್ರಕರಣಗಳು

  2019-20ನೇ ಸಾಲಿನಲ್ಲಿ ದಾಖಲಾದ ಹೊಸ ಪ್ರಕರಣಗಳ ಸಂಖ್ಯೆ

  2019-20ನೇ ಸಾಲಿನ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾದ ಒಟ್ಟು ಪ್ರಕರಣಗಳು

  2019-20ನೇ ಸಾಲಿನ ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ

  ಮಾರ್ಚ್ 2020 ಅಂತ್ಯಕ್ಕೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ

  1

      941

      12849

      13790

        12630

      1160

   2. ಬಾಲ ನ್ಯಾಯ ಮಂಡಳಿ

          ಬಾಲನ್ಯಾಯ ಕಾಯ್ದೆಯ ಅನ್ವಯ ರಚಿತವಾದ ಬಾಲನ್ಯಾಯ ಮಂಡಳಿಯಲ್ಲಿ ಬೆಂಗಳೂರು ನಗರದಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟರು ಹಾಗೂ ಉಳಿದ ಜಿಲ್ಲೆಗಳಲ್ಲಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳು ಬಾಲನ್ಯಾಯ  ಮಂಡಳಿಯ ಅಧ್ಯಕ್ಷರಾಗಿರುತ್ತಾರೆ. ಉಳಿದ ಇಬ್ಬರು ಸದಸ್ಯರು ಸಮಾಜ ಸೇವಾಕರ್ತರಾಗಿದ್ದು, ಇವರುಗಳು ಉಚ್ಛ ನ್ಯಾಯಾಲಯದ  ನಿವೃತ್ತ ನ್ಯಾಯಾಧೀಶರನ್ನು ಒಳಗೊಂಡಂತಹ ರಾಜ್ಯ ಆಯ್ಕೆ ಸಮಿತಿಯಿಂದ ಆಯ್ಕೆಗೊಂಡವರಾಗಿರುತ್ತಾರೆ. ಸರ್ಕಾರದ ಅಧಿಸೂಚನೆ ಸಂಖ್ಯೆ-2, ಸಂಖ್ಯೆ ಮಮಅಇ 202 ಮಭಾಬ 2017 (ಭಾಗ-1) ದಿ: 30.11.2017 ಎಲ್ಲಾ 30 ಜಿಲ್ಲೆಗಳಲ್ಲಿ ಬಾಲನ್ಯಾಯ ಮಂಡಳಿಗಳನ್ನು ರಚಿಸಲಾಗಿದೆ. ದಿನಾಂಕ:25.08.2018ರ ಆದೇಶ ಸಂಖ್ಯೆ: ಮಮಇ 267 ಮಭಾಬ  2015ರಲ್ಲಿ ಬೆಂಗಳೂರು ನಗರ, ವಿಜಯಪುರ, ಕಲಬುರಗಿ, ಬೆಳಗಾವಿ ಹಾಗೂ ಮಂಗಳೂರು ಜಿಲ್ಲೆಗೆ ಹೆಚ್ಚುವರಿಯಾಗಿ 5 ಬಾಲನ್ಯಾಯ ಮಂಡಳಿಗಳನ್ನು ಮಂಜೂರು ಮಾಡಲಾಗಿದೆ. ಸದರಿ ಬಾಲನ್ಯಾಯ ಮಂಡಳಿಗಳಿಗೆ ಸದಸ್ಯರುಗಳ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಹಾಗೂ ಮ್ಯಾಜಿಸ್ಟ್ರೆಟರ್ ರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

  ಕ್ರ ಸಂ

  1ನೇ ಏಪ್ರಿಲ್ 2019ರಂದು ಬಾಕಿ ಇರುವ ಪ್ರಕರಣಗಳು

  2019-20 ನೇ ಸಾಲಿನ ಹೊಸ ಪ್ರಕರಣಗಳ ಸಂಖ್ಯೆ

  2019-20ನೇ ಸಾಲಿನ ಬಾಲನ್ಯಾಯ ಮಂಡಳಿ ಮುಂದೆ ಹಾಜರಾದ ಒಟ್ಟು ಪ್ರಕರಣಗಳು

  2019-20ನೇ ಸಾಲಿನ ಇತ್ಯರ್ಥವಾದ ಪ್ರಕರಣಗಳ ಸಂಖ್ಯೆ

  ಮಾರ್ಚ್ 2020ರ ಅಂತ್ಯಕ್ಕೆ ಬಾಕಿ ಇರುವ ಪ್ರಕರಣಗಳ ಸಂಖ್ಯೆ

  1

         3141

        1819

       4960

        2232

           2728

   ಮಕ್ಕಳ ವಿಶೇಷ ಪೊಲೀಸ್ ಘಟಕಗಳು : (SJPU)

          ಮಕ್ಕಳಿಗೆ ಸಂಬಂಧಿಸಿದಂತೆ ಪೊಲೀಸರ ಕೆಲಸಗಳನ್ನು ಸಂಯೋಜಿಸಲು, ರಾಜ್ಯ ಸರ್ಕಾರವು ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ ಅಥವಾ ಅದಕ್ಕಿಂತಲೂ ಮೇಲ್ಪಟ್ಟ ಹುದ್ದೆಯ ಅಧಿಕಾರಿಗಳ ನಾಯಕತ್ವದಲ್ಲಿ “ಮಕ್ಕಳ ಕಲ್ಯಾಣಾಧಿಕಾರಿ” ಎಂದು ಹೆಸರಿಸಲಾಗುವ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಹೊಂದಿರುವ ಮಕ್ಕಳ  ವಿಶೇಷ ಪೊಲೀಸ್ ಘಟಕವನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದ್ದು, ಮಕ್ಕಳ ಕಲ್ಯಾಣ ಕಾರ್ಯಕ್ರಮಗಳಲ್ಲಿ ಅನುಭವ ಇರುವ ಇಬ್ಬರು ಸಮಾಜ ಕಾರ್ಯಕರ್ತರನ್ನು ಹೊಂದಿದ್ದು, ಇದರಲ್ಲಿ ಒಬ್ಬರು ಮಹಿಳೆಯಾಗಿರಬೇಕು. ಈ ಮಕ್ಕಳ ವಿಶೇಷ ಪೊಲೀಸ್ ಘಟಕದ ಕಲ್ಯಾಣಾಧಿಕಾರಿಗೆ ಅವರನ್ನು ನೇಮಿಸಿದ ಕೂಡಲೇ ಬುನಾದಿ ತರಬೇತಿಯನ್ನು ನೀಡಿ ಅವರ ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಯಾರು ಮಾಡಬೇಕು.

        ಪ್ರತಿ ಪೊಲೀಸ್ ಠಾಣೆಯಲ್ಲಿ ಕನಿಷ್ಠ ಒಬ್ಬ ಸಹಾಯಕ ಸಬ್-ಇನ್ಸ್ ಪೆಕ್ಟರ್ ಗಿಂತ ಕೆಳಗಿನ ಹುದ್ದೆಯವರಲ್ಲದ, ಸೂಕ್ತವಾದ ತರಬೇತಿ ಹೊಂದಿದ್ದು, ಮಕ್ಕಳು ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಕಳಕಳಿ ಹೊಂದಿರುವ ಹಾಗೂ ಮಾಹಿತಿ ಹೊಂದಿರುವ ಪೊಲೀಸರನ್ನು “ಮಕ್ಕಳ ಕಲ್ಯಾಣಾಧಿಕಾರಿ” ಎಂದು ಗುರುತಿಸಬೇಕು ಮತ್ತು ಅವರೇ ಅಪರಾಧಗಳಿಗೀಡಾದ ಮಕ್ಕಳು ಮತ್ತು ಅಪರಾಧಿತ ಕೃತ್ಯಗಳನ್ನು ಮಾಡಿದ ಮಕ್ಕಳ ಪ್ರಕರಣಗಳನ್ನು ವಿಲೇ ಮಾಡಲು ಇತರ ಪೊಲೀಸರೊಂದಿಗೆ, ಸ್ವಯಂ ಸೇವಾ ಸಂಘಟನೆಗಳೊಡನೆ ಸಂಪರ್ಕ ಹೊಂದಿರಬೇಕು.  ಮಕ್ಕಳ ವಿಶೇಷ ಘಟಕದಲ್ಲಿ ಮಕ್ಕಳನ್ನು  ಕುರಿತು ಕೆಲಸ ಮಾಡುತ್ತಿರುವ ರೈಲ್ವೇ  ಪೊಲೀಸರು ಸಹ ಸೇರಿರುತ್ತಾರೆ. ಪ್ರಸ್ತುತ ರಾಜ್ಯದಲ್ಲಿ ಒಟ್ಟು 1890 ಮಕ್ಕಳ ಕಲ್ಯಾಣ ಪೊಲೀಸ್ ಅಧಕಾರಿಗಳು, 945 ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಹಾಗೂ 45 ಹಿರಿಯ ಮಕ್ಕಳ ಕಲ್ಯಾಣ ಪೊಲೀಸ್ ಅಧಿಕಾರಿಗಳು ಒಟ್ಟು 45 ಮಕ್ಕಳ ವಿಶೇಷ ಪೊಲೀಸ್ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.

   ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳು

  ಸಾಂಸ್ಥಿಕ ಸೇವೆಗಳು

  1. ಬಾಲ ಮಂದಿರಗಳು

            ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದ ಮಕ್ಕಳ ಪ್ರಕರಣಗಳ ವಿಚಾರಣೆ ವೇಳೆಯಲ್ಲಿ ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳ ಪಾಲನೆ ಮತ್ತು ರಕ್ಷಣೆಗಾಗಿ ಹಾಗೂ ದೀರ್ಘಾವಧಿ ಪುನರ್ ವಸತಿಗಾಗಿ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 50 (1) ರನ್ವಯ ಬಾಲಮಂದಿರಗಳನ್ನು (ಬಾಲಕ/ಬಾಲಕಿಯರ) ಸ್ಥಾಪಿಸಲಾಗಿದೆ.ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಬಂದ ಮಕ್ಕಳನ್ನು ಸಮಿತಿಯ ಆದೇಶದನ್ವಯ ಬಾಲಮಂದಿರಗಳಿಗೆ ದಾಖಲು ಮಾಡಿಕೊಳ್ಳಲಾಗುವುದು. ಈ ರೀತಿ ಅಭಿರಕ್ಷಣೆಗೆ ಒಳಪಟ್ಟ ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ, ಆರೋಗ್ಯ ಸೇವೆ ಹಾಗೂ ಮನೋರಂಜನೆಯನ್ನು ಒದಗಿಸುವುದರ ಜೊತೆಗೆ ಪುನರ್ ವಸತಿಗೆ ಅಗತ್ಯವಾದ ಶಿಕ್ಷಣ ಹಾಗೂ ತರಬೇತಿಯನ್ನು ಒದಗಿಸಲಾಗುವುದು. ಮಕ್ಕಳನ್ನು ವಿಧ್ಯಾಭ್ಯಾಸಕ್ಕಾಗಿ ಸರ್ಕಾರಿ ಅಥವಾ ಖಾಸಗಿ ಶಾಲೆ ಮತ್ತು ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.ರಾಜ್ಯದಲ್ಲಿ ಒಟ್ಟು 59 ಬಾಲಮಂದಿರಗಳಿದ್ದು, ಇವುಗಳಲ್ಲಿ 29 ಬಾಲಕರಿಗಾಗಿ ಹಾಗೂ 29 ಬಾಲಕಿಯರಿಗಾಗಿ ಹಾಗೂ ಒಂದು ಶಿಶುಮಂದಿರ 6 ವರ್ಷದೊಳಗಿನ ಮಕ್ಕಳಿಗಾಗಿ (ಗಂಡು ಮತ್ತು ಹೆಣ್ಣು ಮಕ್ಕಳಿಗಾಗಿ) ಕಾರ್ಯ ನಿರ್ವಹಿಸುತ್ತಿವೆ, ಇವುಗಳಲ್ಲಿ ಮನೋವಿಕಲ ಗಂಡು ಮಕ್ಕಳಿಗಾಗಿ ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ, ಹೆಣ್ಣು ಮಕ್ಕಳಿಗಾಗಿ ಹುಬ್ಬಳ್ಳಿ ಹಾಗೂ ಗುಲ್ಬರ್ಗಾದಲ್ಲಿ ಬಾಲಮಂದಿರಗಳನ್ನು ನಡೆಸಲಾಗುತ್ತಿದೆ. ಮಾರ್ಚ್ 2020 ಅಂತ್ಯಕ್ಕೆ 1013 ಗಂಡು ಮಕ್ಕಳು ಹಾಗೂ 1347 ಹೆಣ್ಣು ಮಕ್ಕಳು ಈ ಬಾಲಮಂದಿರಗಳಲ್ಲಿರುತ್ತಾರೆ. ಶಿಶುಮಂದಿರದಲ್ಲಿ (0-6 ವರ್ಷ) ಮಾರ್ಚ್ 2020 ಅಂತ್ಯಕ್ಕೆ ಒಟ್ಟು 44ಮಕ್ಕಳು ಇರುವರು.

   

   ಬಾಲಮಂದಿರದ ಮಕ್ಕಳಿಗಾಗಿ ಹಮ್ಮಿಕೊಂಡ ಇತರ ಕಾರ್ಯಕ್ರಮಗಳು:

  1. IDIA ಚಾರಿಟೆಬಲ್ ಟ್ರಸ್ಟ್, ಬೆಂಗಳೂರು ಇವರಿಂದ ದಿ:29.05.2018 ಹಾಗೂ 30.05.2018 ರಂದು 11 ಜಿಲ್ಲೆಯ ಬಾಲಮಂದಿರದ 9,10 ಮತ್ತು ಪಿಯುಸಿ ಮೊದಲ ವರ್ಷದ 50 ಮಕ್ಕಳಿಗೆ ಕಾನೂನು ವಿಷಯದ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕಾನೂನು  ವಿಷಯದಲ್ಲಿ ಅಧ್ಯಯನ ಮಾಡಲು ನಡೆಸಲಾಗುವ  CLAT entrance Test ಗೆ ಸಹಕಾರಿಯಾಗುವಂತೆ ಮಕ್ಕಳಿಗೆ ತಜ್ಞರಿಂದ ಪೂರ್ವಭಾವಿ ಸಮಾಲೋಚನೆ ನೀಡಲಾಗಿದೆ. ಮಕ್ಕಳಿಗೆ ಎಂಟರೆನ್ಸ್ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು
  2. ಸೈಕ್ಲೋಥಾನ್ ಕಾರ್ಯಕ್ರಮ:

            ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಉಮೀದ 1000 ಸೈಕ್ಲೋಥಾನ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ಸಹಯೋಗದಲ್ಲಿ ದಿನಾಂಕ:04.12.2018 ರಿಂದ ದಿನಾಂಕ:9.12.2018ರವರೆಗೆ ಬೆಳಗಾವಿಯಿಂದ ಬೆಂಗಳೂರಿನವರೆಗೆ ಮಹಿಳಾ ಜಾಥಾವನ್ನು ಆಯೋಜಿಸಲಾಗಿತ್ತು. ಈ ಜಾಥಾದಲ್ಲಿ 40 ಮಹಿಳಾ ಪೊಲೀಸ್ ಸಿಬ್ಬಂದಿಗಳಲ್ಲದೆ, 04 ಮಹಿಳಾ ಐ.ಎ.ಎಸ್, ಐ.ಪಿ.ಎಸ್, ಕೆ.ಎ.ಎಸ್ ಮತ್ತು ಕೆ.ಎಸ್.ಪಿ.ಎಸ್ ಮಹಿಳಾ ಅಧಿಕಾರಿಗಳೂ ಭಾಗವಹಿಸಿರುತ್ತಾರೆ. ಈ ಕಾರ್ಯಕ್ರಮವು ಮಾನ್ಯ ಡಿಜಿ & ಐಜಿಪಿ ರವರ ಒಪ್ಪಿಗೆ ಮತ್ತು ಮಾರ್ಗದರ್ಶನದಲ್ಲಿ ನಡೆದಿರುತ್ತದೆ. ಜಾಥಾವು ದಿನಾಂಕ:05.12.2018ರಂದು ಬೆಳಗಾವಿಯಿಂದ ಪ್ರಾರಂಭವಾಗಿ ಹುಬ್ಬಳ್ಳಿ, ರಾಣೆಬೆನ್ನೂರು, ಚಿತ್ರದುರ್ಗ, ತುಮಕೂರು ಮೂಲಕವಾಗಿ ಬೆಂಗಳೂರಿನಲ್ಲಿ ಕೊನೆಗೊಂಡಿರುತ್ತದೆ. ಈ ಸೈಕಲ್ ಜಾಥಾವು ಪ್ರಮುಖ ಉದ್ದೇಶ ಮಹಿಳಾ ಸಬಲೀಕರಣ, ಮಹಿಳಾ ಶಿಕ್ಷಣ, ಸ್ವಚ್ಛ ಭಾರತ್, ವೃಕ್ಷಾರೋಪಣಾ, ಬಾಲ್ಯವಿವಾಹ, ಪದ್ದತಿಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ, ಮಹಿಳಾ ನೈರ್ಮಲೀಕರಣ ಮುಂತಾದ ಕಾರ್ಯಕ್ರಮಗಳ ಕುರಿತು ಸಾರ್ವಜನಿಕರಲ್ಲಿ ವಿಶೇಷವಾಗಿ  ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಲ್ಲಿ  ಜಾಗೃತಿ ಮೂಡಿಸುವುದು. ಈ ಜಾಥಾ ಸಾಗುವ ಮಾರ್ಗದಲ್ಲಿನ ಮಹಿಳಾ ಶಾಲೆ, ಕಾಲೇಜು, ಐಟಿಐ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಬೆಳಗಾವಿ, ರಾಣೇಬೆನ್ನೂರು, ಚಿತ್ರದುರ್ಗ , ತುಮಕೂರು ಮತ್ತು ಬೆಂಗಳೂರು ಜಿಲ್ಲೆಯ ಬಾಲಮಂದಿರದ ಮಕ್ಕಳು, ರಾಜ್ಯ ಮಹಿಳಾ ನಿಲಯ ಸ್ವಾಧಾರ ಕೇಂದ್ರಗಳ ಗುಂಪುಗಳೊಂದಿಗೆ ಭಾಗವಹಿಸಲು ತಿಳಿಸಲಾಗಿತ್ತು.

           ಸದರಿ ಕಾರ್ಯಕ್ರಮದಲ್ಲಿ ಬೆಳಗಾವಿ, ರಾಣೇಬೆನ್ನೂರು, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಬಾಲಮಂದಿರದ ಮಕ್ಕಳು ಭಾಗವಹಿಸಿರುತ್ತಾರೆ ಹಾಗೂ  ರಾಲಿಯಲ್ಲಿ ಭಾಗವಹಿಸಿದವರೊಂದಿಗೆ ಮಕ್ಕಳಿಗಾಗಿ ಸಂವಾದ ಕಾರ್ಯಕ್ರಮವನ್ನು ಸಹ ಏರ್ಪಡಿಸಿರುತ್ತಾರೆ. ಸೈಕಲ್ ಜಾಥಾ ಕಾರ್ಯಕ್ರಮದಲ್ಲಿ ಮಹಿಳಾ ಸಬಲೀಕರಣ, ಬಾಲ್ಯ ವಿವಾಹ ನಿಷೇಧ, ಮಕ್ಕಳ ಹಕ್ಕುಗಳು, ಪೋಕ್ಸೋದಂತಹ ಪ್ರಮುಖ ಸಮಸ್ಯೆಗಳನ್ನು ತೆಗೆದುಕೊಂಡು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಹಾಗೂ ಮಕ್ಕಳ ಅಭಿವೃದ್ಧಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಕಛೇರಿಯಿಂದ ಅರಿವು ಮೂಡಿಸಲು ಮುದ್ರಿಸಿರುವ ಭಿತ್ತಿ ಪತ್ರಗಳ ಮೂಲಕ ಸಾರ್ವಜನಿಕರಿಗೆ ಅರಿವನ್ನು ಮೂಡಿಸಿದರು.

   

  1. ಅರ್ಹ ಸಂಸ್ಥೆ:

         ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಮಕ್ಕಳ ಪಾಲನೆ ಮತ್ತು ರಕ್ಷಣೆ ಹಾಗೂ ಪುನರ್ವಸತಿ ಒದಗಿಸುತ್ತಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ನೋಂದಣಿ ಮಾಡಲು ಅವಕಾಶವಿದ್ದು ಇಂತಹ 41 ಸಂಸ್ಥೆಗಳನ್ನು ಅರ್ಹ ಸಂಸ್ಥೆಗಳೆಂದು ಗುರುತಿಸಲಾಗಿದೆ. ಇವುಗಳಲ್ಲಿ 08 ಸಂಸ್ಥೆಗಳಿಗೆ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ. 2018-19ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 234 ಗಂಡು ಮಕ್ಕಳು ಹಾಗೂ 301 ಹೆಣ್ಣು ಮಕ್ಕಳು ಈ ಸಂಸ್ಥೆಗಳಲ್ಲಿ ಆಶ್ರಯ ಪಡೆದಿರುತ್ತಾರೆ. 2019ರ ಮಾರ್ಚ್ ಅಂತ್ಯಕ್ಕೆ, 2017-18ನೇ ಸಾಲಿನ ಅನುದಾನ ರೂ.55,39,779/-ಗಳನ್ನು 3 ಸಂಸ್ಥೆಗಳಿಗೆ ಬಿಡುಗಡೆ ಮಾಡಿದೆ. 

   2. ವೀಕ್ಷಣಾಲಯಗಳು:

       ವೀಕ್ಷಣಾಲಯಗಳು ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ ಮಕ್ಕಳ, ಅವರ ವಿರುದ್ಧದ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ತಾತ್ಕಾಲಿಕವಾಗಿ ಅಭಿರಕ್ಷಣೆ ಒದಗಿಸುವ ಸಂಸ್ಥೆಗಳಾಗಿರುತ್ತವೆ. ಭಾರತೀಯ ದಂಡ ಸಂಹಿತೆ ಹಾಗೂ ಇತರೆ ಶಾಸನಗಳನ್ವಯ ಕಾನೂನಿನೊಡನೆ ಸಂಘರ್ಷಕ್ಕೊಳಪಟ್ಟ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳನ್ನು ಬಾಲನ್ಯಾಯ(ಮಕ್ಕಳ ಪೊಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ (4)ರಡಿ ಸ್ಥಾಪಿಸಿರುವ ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು. ಕಾನೂನಿನೊಡನೆ ಸಂಘರ್ಷಣೆಗೆ ಒಳಪಟ್ಟ ಮಕ್ಕಳನ್ನು ವಿಚಾರಣಾ ಅವಧಿಯಲ್ಲಿ ಸಾಮಾನ್ಯವಾಗಿ 4 ತಿಂಗಳವರೆಗೆ ಪರಿವೀಕ್ಷಣೆಗಾಗಿ ವೀಕ್ಷಣಾಲಯದಲ್ಲಿ ಇಡಲಾಗುವುದು. ಪ್ರಸ್ತುತ 17 ವೀಕ್ಷಣಾಲಯಗಳು ಕಾರ್ಯನಿರ್ವಹಿಸುತ್ತಿವೆ. ಮಾರ್ಚ್ 2019ರ ಅಂತ್ಯಕ್ಕೆ ಈ ವೀಕ್ಷಣಾಲಯಗಳಲ್ಲಿ 111 ಗಂಡು ಮಕ್ಕಳು ಆಶ್ರಯ ಪಡೆದಿರುತ್ತಾರೆ. 

   3. ವಿಶೇಷ ಗೃಹಗಳು

       ಬಾಲನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 18G ರಡಿ ಆದೇಶ ಮಾಡಿದ ಕಾನೂನಿನ ಸಂಘರ್ಷಕ್ಕೆ ಒಳಗಾದ ಮಕ್ಕಳ ಧೀರ್ಘಾವದಿ ಪುನರ್ವಸತಿಗಾಗಿ ವಿಶೇಷ ಗೃಹವನ್ನು ಸ್ಥಾಪಿಸಬೇಕಾಗಿದ್ದು, ಅದರಂತೆ ಬೆಂಗಳೂರು(ನಗರ) ಹಾಗೂ ಬೆಳಗಾವಿಯಲ್ಲಿಯ ವೀಕ್ಷಣಾಲಯಗಳು ಗಂಡು ಮಕ್ಕಳಿಗಾಗಿ ಹಾಗೂ ಬೆಂಗಳೂರು(ಗ್ರಾಮಾಂತರ) ಮತ್ತು ದಾವಣೆಗೆರೆಯಲ್ಲಿಯ ವೀಕ್ಷಣಾಲಯಗಳು ಹೆಣ್ಣು ಮಕ್ಕಳಿಗಾಗಿ ವಿಶೇಷ ಗೃಹಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ಎಕೋ-ವಿಶೇಷ ಗೃಹ: ಸರ್ಕಾರವು ಎಕೋ(ECHO) (ಸೆಂಟರ್ ಫಾರ್ ಜುವೆನೈಲ್ ಜಸ್ಟೀಸ್), ಎಂಬ ಸ್ವಯಂ ಸೇವಾ ಸಂಸ್ಥೆಗೆ ಅರ್ಹ ಸಂಸ್ಥೆಯೆಂದು ಮಾನ್ಯತೆ ನೀಡಿ ಬೆಂಗಳೂರು(ನಗರ)ದಲ್ಲಿ ವಿಶೇಷ ಗೃಹವನ್ನು  ನಡೆಸಲು ಅನುಮತಿ ನೀಡಿರುತ್ತದೆ. ಮಾರ್ಚ್ 2019ರ  ಅಂತ್ಯಕ್ಕೆ 30 ಮಕ್ಕಳಿಗೆ ಸಂಸ್ಥೆಯಲ್ಲಿ ಪುನರ್ವಸತಿಗೆ ಅವಕಾಶ ಮಾಡಲಾಗಿದೆ.

           ಎಕೋ ಸಂಸ್ಥೆಯು ವಿವಿಧ ಪುನರ್ವಸತಿಯ ಕಾರ್ಯಕ್ರಮಗಳನ್ನು ಮತ್ತು ಮಾರುಕಟ್ಟೆಯಲ್ಲಿ ಪ್ರಚಲಿತವಿರುವ ವೃತ್ತಿಪರ ಚಟುವಟಿಕೆಗಳಲ್ಲಿ ತರಬೇತಿಗಳನ್ನು ನೀಡುವ ಮೂಲಕ ಉದ್ಯೋಗವಕಾಶವನ್ನು ಖಾತರಿಪಡಿಸುತ್ತಿದೆ. ಎಕೋ ವಿಶೇಷ ಗೃಹವು ವಿವಿಧ ರೀತಿಯ ಔದ್ಯೋಗಿಕ ತರಬೇತಿ ಕಾರ್ಯಕ್ರಮಗಳಾದ ಯಂತ್ರಚಾಲಿತ ಹೊಲಿಗೆ, ಕಂಪ್ಯೂಟರ್, ಡ್ರೈವಿಂಗ್, ಬಟ್ಟೆ ತಯಾರಿಕೆ, ಮನೆಗೆಲಸ, ಕ್ಲೇ ಅಚ್ಚೊತ್ತುವಿಕೆ, ತೋಟಗಾರಿಕೆ, ಕೃಷಿ ಮತ್ತು ಪಶುಸಂಗೋಪನೆ ಇತ್ಯಾದಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ. ಇದರ ಪರಿಣಾಮವಾಗಿ ಮಕ್ಕಳಲ್ಲಿ ಗುಣಾತ್ಮಕ ಚಿಂತನೆಯನ್ನು ಬೆಳೆಸುವುದಕ್ಕೆ ಸಹಕಾರಿಯಾಗಿದೆ. ಇದರಿಂದ ಮಕ್ಕಳು ಸಂಸ್ಥೆಯಿಂದ ಬಿಡುಗಡೆ ಹೊಂದಿ, ಸಮಾಜಕ್ಕೆ ಮರಳಿದಾಗ ಸಮಾಜದಲ್ಲಿ ಬದುಕಲು ಸಹಕಾರಿಯಾಗುತ್ತದೆ. ಇಲ್ಲಿ ವಾಸಿಸುವ ಮಕ್ಕಳು ಆಪ್ತ ಸಮಾಲೋಚನೆಗೊಳಗಾಗಿ ಶಿಕ್ಷಣವನ್ನು ಪಡೆದುಕೊಂಡು ಮತ್ತು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿರುತ್ತಾರೆ. ಬಾಲನ್ಯಾಯ ಕಾಯ್ದೆ 2015ರ ಸೆಕ್ಸನ್ 49ರ ಪ್ರಕಾರ ಬೆಂಗಳೂರಿನಲ್ಲಿ 50 ಮಕ್ಕಳಿಗೆ ಪ್ಲೇಸ್ ಆಫ್ ಸೇಫ್ಟಿ ಸಂಸ್ಥೆಯನ್ನು ಪ್ರಾರಂಭಿಸಲು ದಿನಾಂಕ:25-04-2017ರ ಸರ್ಕಾರಿ ಆದೇಶ ಸಂಖ್ಯೆ ಮಮಇ 2016 ಮಭಾಬ 2016ರಲ್ಲಿ ಮಂಜೂರಾತಿ ನೀಡಲಾಗಿದ್ದು, ಸಂಸ್ಥೆಯ ಕಾರ್ಯ ಚಟುವಟಿಕೆಯನ್ನು ಪ್ರಾರಂಭಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ.

   4.ನಗರ ಮತ್ತು ಅರೆನಗರ ಪ್ರದೇಶಗಳಲ್ಲಿ ಮಕ್ಕಳ ರಕ್ಷಣೆ ಮತ್ತು ಪೋಷಣೆಗಾಗಿ ತೆರೆದ ತಂಗುದಾಣಗಳು:

        ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಕುಟುಂಬದ ಬೆಂಬಲ ಇಲ್ಲದ, ಪಾಲನೆ ಮತ್ತು ಪೋಷಣೆಯ ಅಗತ್ಯವುಳ್ಳ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೆಂಬಲ ಒದಗಿಸುವುದೇ ಈ ಕಾರ್ಯಕ್ರಮದ ಗುರಿಯಾಗಿರುತ್ತದೆ- ಮುಖ್ಯವಾಗಿ ಭಿಕ್ಷಾಟಣೆಯಲ್ಲಿ ತೊಡಗಿರುವ ಮಕ್ಕಳು, ಚಿಂದಿ ಆಯುವ ಮಕ್ಕಳು, ಬೀದಿ ಮಕ್ಕಳು, ಕೆಲಸ ಮಾಡುವ ಮಕ್ಕಳು, ಅನಾಥ ಮಕ್ಕಳು, ಸಾಗಾಣೆಯಾದ ಮಕ್ಕಳು, ಪರಿತ್ಯಜಿಸಲ್ಪಟ್ಟ ಮಕ್ಕಳು, ಶೋಷಣೆ, ದೌರ್ಜನ್ಯಕ್ಕೆ ಒಳಗಾದ ಬೀದಿ ಮಕ್ಕಳು ಹಾಗೂ ವಲಸೆ ಬಂದವರ ಮಕ್ಕಳು ಮತ್ತು ರಸ್ತೆ ಬದಿಯಲ್ಲಿ ವಾಸಿಸುವವರ ಮಕ್ಕಳು.

   ತೆರೆದ ತಂಗುದಾಣಗಳು:

  1. ಅನಾಥ ಹಾಗೂ ಅಲಕ್ಷ್ಯ ಬೀದಿ ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯ ಸೇವೆ, ಸ್ವಚ್ಛತೆ ಹಾಗೂ ನೈರ್ಮಲ್ಯ, ಕುಡಿಯುವ ಶುದ್ಧ ನೀರು, ಶಿಕ್ಷಣ, ಆಟಪಾಠಗಳಿಗೆ ಸೌಕರ್ಯಗಳನ್ನು ಒದಗಿಸಿ ಶೋಷಣೆ/ದೌರ್ಜನ್ಯಗಳ ವಿರುದ್ಧ ರಕ್ಷಣೆಯನ್ನು ಒದಗಿಸುತ್ತದೆ.
  2. ಬೀದಿ ಮಕ್ಕಳನ್ನು ಶಾಲೆಗಳಿಗೆ/ಕೆಲಸಕ್ಕೆ ಸೇರಿಸುವುದು, ವೃತ್ತಿಪರ ಶಿಕ್ಷಣ ನೀಡುವುದು, ಆರೋಗ್ಯ ಸೇವೆಗಳನ್ನು ಒದಗಿಸುವುದು ಹಾಗೂ ಅವರಲ್ಲಿ ಸಾಮಾನ್ಯವಾಗಿರುವ ಮಾದಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವುದು.
  3. ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗೆ ತಾತ್ಕಾಲಿಕವಾಗಿ ಹಗಲು ಮತ್ತು ರಾತ್ರಿ ಆಶ್ರಯವನ್ನು ಕಲ್ಪಿಸುತ್ತವೆ. ಆ ಅವಧಿಯಲ್ಲಿ ಮಕ್ಕಳಿಗೆ ಪುರ್ನವಸತಿ ಕಲ್ಪಿಸಲು ಪ್ರಯತ್ನಿಸಲಾಗುತ್ತದೆ.

         ರಾಜ್ಯದಲ್ಲಿ ಪ್ರಸ್ತುತ ಒಟ್ಟಾರೆ 40 ಮಕ್ಕಳ ತೆರೆದ ತಂಗುದಾಣಗಳಿರುತ್ತವೆ. ಒಟ್ಟು ಯೋಜನಾ ವೆಚ್ಚದಲ್ಲಿ ಶೇಕಡ 60 ರಷ್ಟು ಕೇಂದ್ರ ಸರ್ಕಾರ, ಶೇಕಡಾ 30 ರಾಜ್ಯ ಸರ್ಕಾರ ಹಾಗೂ ಉಳಿದ ಶೇಕಡಾ 10 ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಯು ಭರಿಸಬೇಕಾಗುತ್ತದೆ. ಮಾರ್ಚ್ 2019ರ  ಅಂತ್ಯಕ್ಕೆ 391 ಹೆಣ್ಣು ಮಕ್ಕಳು ಮತ್ತು 678 ಮಕ್ಕಳು ತೆರೆದ ತಂಗುದಾಣಗಳಲ್ಲಿ ಆಶ್ರಯ ಪಡೆದಿರುತ್ತಾರೆ. 2018-19 ಸಾಲಿನಲ್ಲಿ 34 ತೆರೆದ ತಂಗುದಾಣಗಳಿಗೆ 2017-18ನೇ ಸಾಲಿನ ಅನುದಾನ ರೂ.4,61,26,307/-ಗಳನ್ನು ಬಿಡುಗಡೆ ಮಾಡಲಾಗಿದೆ.

   ಬಾಲನ್ಯಾಯ ಕಾಯ್ದೆಯನ್ವಯ ಒದಗಿಸಿರುವ ಇತರೆ ವ್ಯವಸ್ಥೆಗಳು:

  1. ಅಭಯಾ ಮಕ್ಕಳ ನಿಧಿ (ಬಾಲನ್ಯಾಯ ಕಾಯ್ದೆ ಸೆಕ್ಷನ್ 105):

          ಕರ್ನಾಟಕ ಮಕ್ಕಳ ನಿಧಿಯನ್ನು ಸರ್ಕಾರದ ಆದೇಶ ಸಂಖ್ಯೆ:ಮಮಇ 183 ಮಭಾಬ 2013, ಬೆಂಗಳೂರು ದಿನಾಂಕ:15.10.2014ರನ್ವಯ ಸ್ಥಾಪಿಸಲಾಗಿದೆ. ಈ ಕರ್ನಾಟಕ ಮಕ್ಕಳ ನಿಧಿಯನ್ನು ಅಧಿಸೂಚನೆ ಸಂಖ್ಯೆ: ಮಮಇ 69 ಮಭಾಬ 2016, ದಿನಾಂಕ:29.12.2016ರಲ್ಲಿ “ಅಭಯಾ ಮಕ್ಕಳ ನಿಧಿ” ಎಂದು ಮಾರ್ಪಡಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಸುಧಾರಣೆಗಾಗಿ ಗರಿಷ್ಠ ರೂ.1.00 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿರುತ್ತದೆ. ಅರ್ಹ ಸಂಸ್ಥೆಗಳ ಮಕ್ಕಳಿಗೆ / ಮಕ್ಕಳ ಕಲ್ಯಾಣ ಸಮಿತಿ ಮೂಲಕ ದಾಖಲಾದ 18 ವರ್ಷದೊಳಗಿನ ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ, ಬಾಲಮಂದಿರ/ ಅರ್ಹಸಂಸ್ಥೆಗಳಲ್ಲಿನ ಮಕ್ಕಳಿಗೆ ವೃತ್ತಿ ತರಬೇತಿ /ಉನ್ನತ ಶಿಕ್ಷಣ ತಾಂತ್ರಿಕ ಶಿಕ್ಷಣ ಶುಲ್ಕಪಾವತಿ/ಮರುಪಾವತಿ 18 ವರ್ಷ ಪೂರ್ಣಗೊಂಡ ಸರ್ಕಾರದ ಬಾಲಮಂದಿರ/ಅರ್ಹ ಸಂಸ್ಥೆಗಳಿಂದ ಬಿಡುಗಡೆಯಾದ ಮಕ್ಕಳ ವಿದ್ಯಾಭ್ಯಾಸ ಪೂರ್ಣಗೊಳಿಸಲು ಅನುಪಾಲನಾ ಸೇವೆ ಮೂಲಕ ಆರ್ಥಿಕ ಬೆಂಬಲ  ಒದಗಿಸಲು ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಸರ್ಕಾರದ ಬಾಲಮಂದಿರ ಮತ್ತು ಅರ್ಹ ಸಂಸ್ಥೆಗಳ ಮಕ್ಕಳನ್ನು ಪ್ರೋತ್ಸಾಹಿಸಲು ಹಾಗೂ ಪೋಕ್ಸೊ ಕಾಯ್ದೆ 2012 ರಡಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳಿಂದ ಗುರುತಿಸಲ್ಪಟ್ಟ ಭಾಷಾಂತಕಾರರು/ವಿಶೇಷ ತಜ್ಞರು/ಸಮಾಲೋಚಕರು/ಗೌರವಧನ ಬೆಂಬಲ ಸೇವೆ ಒದಗಿಸುವವರಿಗೆ ಶುಲ್ಕ ಪಾವತಿಸಲು (ಪ್ರತಿ ಪ್ರಕರಣಕ್ಕೆ ರೂ.1000.00ರಂತೆ) ಅಭಯ ಮಕ್ಕಳ ನಿಧಿಯಲ್ಲಿ ಅವಕಾಶವಿರುತ್ತದೆ. ಜಿಲ್ಲೆಗಳ ಬೇಡಿಕೆ ಆಧರಿಸಿ (2014-15 ರಿಂದ ಈವರೆಗೆ) ಒಟ್ಟು ರೂ.108.68/-ಗಳ ಅನುದಾನ (ಕೇಂದ್ರ ಕಛೇರಿಯ ಅನುದಾನ ಮತ್ತು ಬಡ್ಡಿ ಹಣ ಮತ್ತು ಅಧ್ಯಯನ ಶುಲ್ಕ ಒಳಗೊಂಡಂತೆ) ಬಿಡುಗಡೆಯಾಗಿದ್ದು, ಒಟ್ಟು ರೂ.85,63,270/-ಗಳ ವೆಚ್ಚವಾಗಿರುತ್ತದೆ. ಒಟ್ಟು 19 ಗಂಡು ಮಕ್ಕಳು ಮತ್ತು 1114 ಹೆಣ್ಣು ಮಕ್ಕಳು ಈ ಅಭಯ ನಿಧಿಯಡಿ ಪ್ರಯೋಜನ ಪಡೆದಿರುತ್ತಾರೆ. 

   ಮಕ್ಕಳ ಪಾಲನಾ ಸಂಸ್ಥೆಗಳ ನೊಂದಣಿ:

         ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ, 2006ರ ಸೆಕ್ಷನ್ 34(3)  ಹಾಗೂ ಕರ್ನಾಟಕ ಬಾಲನ್ಯಾಯ ನಿಯಮಗಳ, 2010ರ ನಿಯಮ 78 (2) (ಎ) ರಂತೆ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರನ್ನು ಬಾಲನ್ಯಾಯ ಕಾಯ್ದೆಯಡಿ ಮಕ್ಕಳ ಸಂಸ್ಥೆಗಳನ್ನು ನೊಂದಣಿ ಮಾಡುವ ಅಧಿಕಾರಿಯೆಂದು ಗುರುತಿಸಿ ದಿನಾಂಕ:05/01/2011ರ ಆದೇಶ ಸಂಖ್ಯೆ:ಮಮಇ 248 ಮಭಾಬ 2010ರಲ್ಲಿ ಆದೇಶಿಸಲಾಗಿತ್ತು. 2018-19ನೇ  ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಮಕ್ಕಳ ರಕ್ಷಣೆಗಾಗಿ ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯವನ್ನು ಪ್ರಾರಂಭಿಸಲು ದಿನಾಂಕ:15/11/2018ರ ಆದೇಶ ಸಂಖ್ಯೆ:ಮಮಇ 467 ಎಸ್ ಜೆಡಿ 2017ರಂದು ಸರ್ಕಾರ ಆದೇಶ ಹೊರಡಿಸಿದೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015 ಸೆಕ್ಷನ್-41(1) ಮತ್ತು ಕೇಂದ್ರ ಸರ್ಕಾರದ ಮಾದರಿ ನಿಯಮ, 2016ರ ಅಧ್ಯಾಯ-6ರ, 21(3)ರಲ್ಲಿ ನೊಂದಣಿ ಪ್ರಾಧಿಕಾರವನ್ನು ರಾಜ್ಯ ಸರ್ಕಾರ ಎಂದು ನಮೂದಿಸಿದೆ. ಅದರಂತೆ, ಸರ್ಕಾರವು ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣಾ ನಿರ್ದೇಶನಾಲಯ ಇವರನ್ನು ಮಕ್ಕಳ ಪಾಲನಾ ಸಂಸ್ಥೆಗಳ ನೊಂದಣಿ ಪ್ರಾಧಿಕಾರವೆಂದು ಗುರುತಿಸಿ ಆದೇಶ ಹೊರಡಿಸಲಾಗಿದೆ. ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಮಕ್ಕಳಿಲ್ಲದಿದ್ದಲ್ಲಿ ಅಂತಹ ಸಂಸ್ಥೆಗಳನ್ನು ರದ್ದುಗೊಳಿಸಲು ಮಾನ್ಯ ಜಿಲ್ಲಾಧಿಕಾರಗಳ ಮೂಲಕ ಪ್ರಸ್ತಾವನೆಯನ್ನು ಕೇಂದ್ರ ಕಛೇರಿಗೆ ಸಲ್ಲಿಸಲು ಸೂಚಿಸಲಾಗಿದೆ. ಈಗಾಗಲೇ ಕೇಂದ್ರ ಕಛೇರಿಗೆ 68 ಮಕ್ಕಳ ಪಾಲನಾ ಸಂಸ್ಥೆಗಳನ್ನು ರದ್ದುಪಡಿಸಲು ಪ್ರಸ್ತಾವನೆಗಳು ಸ್ವೀಕೃತಗೊಂಡಿರುತ್ತವೆ. ರಾಜ್ಯದಲ್ಲಿ ಅಂದಾಜು 1300 ಮಕ್ಕಳ ಪಾಲನಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಕಂಡುಬಂದಿದ್ದು, ವ್ಯಾಪಕವಾಗಿ ಪ್ರಚಾರ ನೀಡಿರುವುದರಿಂದ ಇದುವರೆಗೂ 1134 ಸಂಸ್ಥೆಗಳು ನೊಂದಣಿಯಾಗಿದ್ದು, 28 ಸಂಸ್ಥೆಗಳ ನೊಂದಣಿಯನ್ನು ರದ್ದುಮಾಡಲಾಗಿದೆ. 141 ಸಂಸ್ಥೆಗಳ ನೊಂದಣಿಯನ್ನು ನವೀಕರಿಸಲಾಗಿದೆ.

   ಹೆಚ್.ಐ.ವಿ ಸೋಂಕಿತ ಮತ್ತು ಬಾದಿತ ಮಕ್ಕಳಿಗಾಗಿ ವಿಶೇಷ ಪಾಲನಾ ಯೋಜನೆ:

            ಹೆಚ್.ಐ.ವಿ ಸೋಂಕಿತ ಮತ್ತು ಬಾದಿತ ಮಕ್ಕಳಿಗಾಗಿ ವಿಶೇಷ ಪಾಲನಾ ಯೋಜನೆಯನ್ನು 2010ನೇ ಸಾಲಿನಿಂದ ಜಾರಿಗೊಳಿಸಲಾಗಿರುತ್ತದೆ. ಹೆಚ್.ಐ.ವಿ/ ಏಡ್ಸ್ ಸೋಂಕಿತ ಮತ್ತು ಬಾದಿತ ಮಕ್ಕಳ ಹಾಗೂ ಏಡ್ಸ್ ನಿಂದ ಪಾಲಕರನ್ನು ಕಳೆದುಕೊಂಡ ಮಕ್ಕಳ ಪಾಲನೆಯ ನಿಮಿತ್ತ ಮಕ್ಕಳಿಗಾಗಿ ವಿಶೇಷ ಪಾಲನಾ ಯೋಜನೆಯನ್ನು ಕರ್ನಾಟಕ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯಿಂದ ಜಿಲ್ಲೆಗಳಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಮೂಲಕ ಅನುಷ್ಠಾಗೊಳಿಸಲಾಗುತ್ತಿದೆ. ವಿಶೇಷ ಪಾಲನಾ ಯೋಜನೆಯ ಮಾರ್ಗಸೂಚಿಗಳನ್ವಯ ಹೆಚ್.ಐ.ವಿ/ಏಡ್ಸ್ ಸೋಂಕಿತ ಕುಟುಂಬದ 18 ವರ್ಷದೊಳಗಿನ ಸೋಂಕಿತ ಮತ್ತು ಬಾದಿತ ಮಕ್ಕಳು ಆರ್ಥಿಕ ಸಹಾಯ ಪಡೆಯಲು ಅರ್ಹರಾಗಿರುತ್ತಾರೆ. ಅವರಿಗೆ ಪೌಷ್ಠಿಕ ಆಹಾರ ಪಡೆಯಲು, ಶಿಕ್ಷಣದ ಮುಖ್ಯ ವಾಹಿನಿಗೆ ತರಲು, ಆರೋಗ್ಯ ಸೇವೆಗಳನ್ನು ಪಡೆಯಲು ನಿಯಮಿತವಾಗಿ ಮನೋ ಸಾಮಾಜಿಕ ಸಲಹೆ ಮತ್ತು ಮಾರ್ಗದರ್ಶನ ಪಡೆಯಲು ಆರ್ಥಿಕ ಸೌಲಭ್ಯವನ್ನು ಬಳಸಿಕೊಳ್ಳುತ್ತಾರೆ. 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ, ಹೆಚ್.ಐ.ವಿ/ ಏಡ್ಸ್ ಸೋಂಕಿತ/ಬಾದಿತ ಮಕ್ಕಳಿಗೆ ನೀಡಲಾಗುತ್ತಿರುವ ಧನ ಸಹಾಯವನ್ನು ರೂ.800/-ಗಳಿಂದ ರೂ.1000/- ಹೆಚ್ಚಿಸಲಾಗಿದೆ.  2018-19ನೇ ಸಾಲಿನಲ್ಲಿ ರೂ.1500/-ಲಕ್ಷ ಅನುದಾನ ಬಿಡುಗಡೆ ಮಾಡಿದ್ದು, 19,535 ಸೋಂಕಿತ ಮತ್ತು ಬಾದಿತ ಮಕ್ಕಳು ಪ್ರಯೋಜನ ಪಡೆಯುತ್ತಿದ್ದಾರೆ.

         ಸಹಯೋಗ ಕಾರ್ಯಕ್ರಮಗಳು:

          ಅಧ್ಯಯನ:

                     2018-19ನೇ ಸಾಲಿನಲ್ಲಿ, ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಅನುಷ್ಠಾನ ಕುರಿತು ಅಧ್ಯಯನ ದೃಷ್ಟಿಯಿಂದ ಬಾಲಮಂದಿರಗಳಿಗೆ ಭೇಟಿ ನೀಡಲು 1) ತುಮಕೂರು ವಿಶ್ವ ವಿದ್ಯಾನಿಲಯ  2) ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು,               ಹಿರಿಯೂರು, ಚಿತ್ರದುರ್ಗ 3) ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ, ವಿಜಯಪುರ 4) ನಿಪ್ಸಿಡ್ 5) ನಿಮ್ಹಾನ್ಸ್ ಡಿಪಾರ್ಟ್ ಮೆಂಟ್ ಆಫ್ ಸೋಶಿಯಲ್ ವರ್ಕ್,, ಬೆಂಗಳೂರು 6) ಪದ್ಮಶ್ರೀ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಬೆಂಗಳೂರು                      7) ಸೆಂಟರ್  ಫಾರ್ ರೂರಲ್ ಡೆವಲಪ್ ಮೆಂಟ್, ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ವರ್ಕ್ ಮತ್ತು ರಿಸರ್ಚ್ ಮುಂಬಯಿ ಒಟ್ಟು  29  ಸಂಶೋದನಾ ವಿದ್ಯಾರ್ಥಿಗಳಿಗೆ ಹಾಗೂ ಡಾ||ಜನಾರ್ಧನ್ (ಸಹಾಯಕ ಪ್ರಾಧ್ಯಾಪಕರು) ನಿಮ್ಹಾನ್ಸ್, ಬೆಂಗಳೂರು,          ಇವರಿಗೆ ರಾಜ್ಯ ಕಛೇರಿಯಿಂದ ಅನುಮತಿ ನೀಡಿದೆ. ಬಾಲನ್ಯಾಯ ಮಂಡಳಿ ಮತ್ತು ವೀಕ್ಷಣಾಲಯಗಳ ಮಕ್ಕಳ ಬಗ್ಗೆ ಅಧ್ಯಯನ ಮಾಡಲು 1) ನಿಮ್ಹಾನ್ಸ್ ಡಿಪಾರ್ಟ್ಮೆಂಟ್ ಆಫ್ ಕ್ಲಿನಿಕಲ್ ಸೈಕಾಲಜಿ 2) ಮಣಿಪಾಲ್ ಅಕಾಡೆಮಿ ಆಫ್ ಹೈಯರ್                      ಎಜುಕೇಷನ್, ಮಣಿಪಾಲ್ 3) ಡಿಪಾರ್ಟ್ ಮೆಂಟ್ ಆಫ್ ಸೈಕಾಲಜಿ ಐಡಿಇ-ಯುನಿವರ್ಸಿಟಿ, ಬೆಂಗಳೂರು ಮದ್ರಾಸ್, ಚೆಪಾಕ್, ಚೆನೈ 4) ಡಿಪಾರ್ಟ್ ಮೆಂಟ್ ಆಫ್ ಫೋರೆನಿಕ್ಸ್ ಸೈನ್ಸ್ (ಜೆಎಐಎನ್) ಡೀಮ್ಡ್ ಯುನಿವರ್ಸಿಟಿ ಬೆಂಗಳೂರು 5) ನಿಮ್ಹಾನ್ಸ         ಸಂಸ್ಥೆ, ಬೆಂಗಳೂರು  ಒಟ್ಟು 5 ಸಂಶೋದನಾ ವಿದ್ಯಾರ್ಥಿಗಳಿಗೆ ರಾಜ್ಯ ಕಛೇರಿಯಿಂದ ಅಧ್ಯಯನಕ್ಕಾಗಿ ಅನುಮತಿ ನೀಡಲಾಗಿದೆ. ಆಯಾ ಜಿಲ್ಲೆಗಳಲ್ಲಿ ಬಾಲಮಂದಿರಗಳಿಗೆ/ ವೀಕ್ಷಣಾಲಯಗಳಿಗೆ ಭೇಟಿ ನೀಡಲು ಜಿಲ್ಲಾ ಮಕ್ಕಳ  ರಕ್ಷಣಾಧಿಕಾರಿಗಳು,                  ಅನುಮತಿ  ನೀಡುತ್ತಿದ್ದಾರೆ.

 

ಇತ್ತೀಚಿನ ನವೀಕರಣ​ : 10-08-2020 01:05 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಮಕ್ಕಳ ರಕ್ಷಣಾ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080